Pages

Wednesday, August 21, 2019

ಸೇವಕನ ಸೇವೆಯನು ಕೇಳಿ ಸೇವಿಪ ಕರುಣಿ

ಸೇವಕನ ಸೇವೆಯನು ಕೇಳಿ ಸೇವಿಪ ಕರುಣಿ


ಪರಮ ಪೂಜ್ಯ ಶ್ರೀ ಸುಯಮೀಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ರಾಘವೇಂದ್ರಮಠದ ವಿದ್ಯಾಸಿಂಹಾಸನವನ್ನು ಅಲಂಕರಿಸಿದ್ದ ಕಾಲವದು.

ಮೈಸೂರು ರಾಜ್ಯದ ಚಾಮರಾಜನಗರದ ಸಮೀಪದಲ್ಲೊಂದು ಪುಟ್ಟ ಊರು ಎಳಂದೂರು. ಮಂತ್ರಾಲಯ ಪ್ರಭುಗಳನ್ನು ಅವಿರತ ಸ್ಮರಿಸುತ್ತಾ ಅವರ ಅನುಗ್ರಹದಿಂದ ಆ ಗ್ರಾಮದಲ್ಲಿ ಸಜ್ಜೀವನವನ್ನು ನಡೆಸುತ್ತಿದ್ದರು ಶ್ರೀ ನರಸಿಂಗರಾಯರು. ನರಸಿಂಗರಾಯರು ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಸೇವೆಯೊಂದನ್ನು ಮಾಡುತ್ತಿದ್ದರು. ಪ್ರತಿ ವರ್ಷವೂ ಹತ್ತಿರದ ಚಾಮರಾಜನಗರಕ್ಕೆ ಹೋಗಿ, ಅಲ್ಲಿ ಅತ್ಯುತ್ತಮವಾದ ರೇಷ್ಮೆ ನೂಲನ್ನು ಆಯ್ದು, ಅದರಿಂದ ಸುಂದರವಾದ ರೇಷ್ಮೆ ವಸ್ತ್ರವನ್ನು ನೇಯಿಸಿ, ಆರಾಧನೆಯ ಕಾಲಕ್ಕೆ ಮಂತ್ರಾಲಯಕ್ಕೆ ತೆರಳಿ, ರಾಘವೇಂದ್ರಸ್ವಾಮಿಗಳ ಅಲಂಕಾರಕ್ಕಾಗಿ ಒಪ್ಪಿಸುವ ಸಂಪ್ರದಾಯವನ್ನು ರೂಢಿಸಿಕೊಂಡಿದ್ದರು ನರಸಿಂಗರಾಯರು. ಹೀಗೆ ಒಮ್ಮೆ ರಾಘವೇಂದ್ರಸ್ವಾಮಿಗಳ ಆರಾಧನೆಯು ಸಮೀಪಿಸುತ್ತಿದೆ. ಆದರೆ ವಿಪರೀತವಾದ ಮಳೆಯಿಂದ ಚಾಮರಾಜನಗರಕ್ಕೆ ಹೋಗಿ ರೇಷ್ಮೆ ವಸ್ತ್ರವನ್ನು ನೇಯಿಸಲಾಗಲಿಲ್ಲ ನರಸಿಂಗರಾಯರಿಗೆ. ಈ ಬಾರಿ ಆರಾಧನೆಗೆ ಮಂತ್ರಾಲಯಕ್ಕೆ ಹೋದಾಗ ರೇಷ್ಮೆ ವಸ್ತ್ರದ ಬದಲು ಯಥಾಶಕ್ತಿ ಕಾಣಿಕೆಯನ್ನು ಹುಂಡಿಗೆ ಹಾಕೋಣವೆಂದು ಸಂಕಲ್ಪಿಸಿಕೊಂಡರು.

ನರಸಿಂಗರಾಯರ ಪುತ್ರಿಯು ಬೆಂಗಳೂರಿನ ಸೀತಾಪತಿ ಅಗ್ರಹಾರದಲ್ಲಿ ವಾಸವಾಗಿದ್ದರು. ಮನೆಯ ಅಂಗಳದಲ್ಲೊಂದು ಬನ್ನೀ ಮರವಿತ್ತು. ಪ್ರತಿ ವರ್ಷವೂ ವಿಜಯದಶಮಿಯಂದು ಸೀತಾಪತಿ ಅಗ್ರಹಾರದ ರಾಯರ ಮಠದಿಂದ ಪ್ರಹ್ಲಾದರಾಜರ ವಿಗ್ರಹವನ್ನು ವೈಭವಯುತವಾದ ಮೆರವಣಿಗೆಯಲ್ಲಿ ಕರೆತಂದು, ಆ ಬನ್ನೀ ಮರದ ಮುಂದೆ ಸ್ಥಾಪಿಸಿ, ಸರ್ವೋಪಚಾರ ಪೂಜೆಯನ್ನು ಸಮರ್ಪಿಸುವುದು ಪದ್ಧತಿ. ನರಸಿಂಗರಾಯರು ಮಂತ್ರಾಲಯಕ್ಕೆ ರೇಷ್ಮೆ ವಸ್ತ್ರದ ಬದಲು ಕಾಣಿಕೆಯನ್ನು ಸಮರ್ಪಿಸಲು ಸಂಕಲ್ಪಿಸಿದ ಸಂದರ್ಭದಲ್ಲಿ ಅವರ ಮತ್ತೊಬ್ಬ ಪುತ್ರಿ ಸರಸ್ವತಿ ಬೆಂಗಳೂರಿನ ಸೀತಾಪತಿ ಅಗ್ರಹಾರದ ಅಕ್ಕನ ಮನೆಗೆ ಬಂದಿದ್ದಾರೆ. ಸರಸ್ವತಿಗೆ ಆ ರಾತ್ರಿ ವಿಚಿತ್ರವಾದ ಸ್ವಪ್ನವಾಯಿತು. ಪ್ರತಿವರ್ಷದಂತೆ ವಿಜಯದಶಮಿಯಂದು ಪ್ರಹ್ಲಾದರಾಜರು ವೈಭವದ ಮೆರವಣಿಗೆಯಲ್ಲಿ ಆಗಮಿಸಿ ಮನೆಯ ಅಂಗಳದಲ್ಲಿನ ಬನ್ನೀ ಮರದ ಬುಡದಲ್ಲಿ ವಿರಾಜಮಾನರಾಗಿದ್ದಾರೆ. ಪ್ರಹ್ಲಾದರಾಜರ ಮುಂದೆ ಭಕ್ತಿಯಿಂದ ಕೈಮುಗಿದು ನಿಂತಿದ್ದಾರೆ ಸರಸ್ವತಿ. ಪ್ರಹ್ಲಾದರಾಜರ ವಿಗ್ರಹ ಪ್ರತಿವರುಷದಂತೆ ಕಾಣುತ್ತಿಲ್ಲ ಆಕೆಗೆ. ಆದರೆ ಏನು ಲೋಪವಾಗಿದೆ ಎಂದು ಅರಿವಾಗುತ್ತಿಲ್ಲ. ಆಕೆಯ ಮನದಲ್ಲಿ ನಡೆಯುತ್ತಿರುವ ಗೊಂದಲವನ್ನು ಅರಿತ ಪ್ರಹ್ಲಾದರಾಜರು ಮಾತನಾಡುತ್ತಾರೆ "ಮಗಳೇ, ನಿನ್ನ ತಂದೆ ನನಗೆ ಈ ವರ್ಷ ರೇಷ್ಮೆ ವಸ್ತ್ರವನ್ನು ತಂದುಕೊಡಲಿಲ್ಲ. ನೋಡು ನಾನು ರೇಷ್ಮೆ ವಸ್ತ್ರವಿಲ್ಲದೇ ಅಲಂಕಾರ ರಹಿತನಾಗಿ ಬರಬೇಕಾಯಿತು ಇಂದು". ಸರಸ್ವತಿಗೆ ಆಗ ಹೊಳೆಯಿತು ಪ್ರಹ್ಲಾದರಾಜರ ವಿಗ್ರಹ ಯಾವುದೇ ಅಲಂಕಾರಗಳಿಲ್ಲದೆ (ವಿಶ್ವರೂಪ) ಮೆರವಣಿಗೆಯಲ್ಲಿ ಆಗಮಿಸಿದೆ ಎಂದು. ಥಟ್ಟನೆ ನಿದ್ರೆಯಿಂದ ಎಚ್ಚರವಾಯಿತು ಆಕೆಗೆ. ಕಂಡ ಕನಸನ್ನು ನೆನೆದ ಆ ಸಾಧ್ವೀಮಣಿಯ ಮೈ ನವಿರೇಳಿತು. ಸಾಕ್ಷಾತ್ ಪ್ರಹ್ಲಾದರಾಜರು ತನ್ನೊಡನೆ ಮಾತನಾಡಿದ್ದಾರೆ. ಪ್ರತಿವರ್ಷದಂತೆ ಈ ಬಾರಿ ನನಗೆ ಅಲಂಕಾರಕ್ಕೆ ವಸ್ತ್ರವಿಲ್ಲವೆಂದು ಹೇಳಿದ್ದಾರೆ. ತಂದೆಯವರಿಗೆ ಕೂಡಲೇ ಈ ವಿಷಯವನ್ನು ತಿಳಿಸಬೇಕೆಂದು ಮರುದಿನವೇ ಎಳಂದೂರಿಗೆ ಪ್ರಯಾಣ ಬೆಳೆಸಿದರು. ತಂದೆಯವರನ್ನು ಕಂಡ ತಕ್ಷಣ "ಅಪ್ಪ ನೀವು ಈ ವರ್ಷದ ಆರಾಧನೆಗೆ ಮಂತ್ರಾಲಯಕ್ಕೆ ಹೋದಾಗ ರೇಷ್ಮೆ ವಸ್ತ್ರ ಸಮರ್ಪಿಸುವುದಿಲ್ಲವೇ?" ಎಂದು ಕೇಳಿದರು. ನರಸಿಂಗರಾಯರು "ಹೌದು ಮಗು. ಬಹಳ ಮಳೆಯಾಗುತ್ತಿದೆ. ಒಳ್ಳೆಯ ರೇಷ್ಮೆ ನೂಲು ದೊರಕುತ್ತಿಲ್ಲ.  ಇಲ್ಲಿಂದ ಚಾಮರಾಜನಗರಕ್ಕೆ ಹೋಗುವುದು ಕಷ್ಟವಾಗುತ್ತಿದೆ. ಹಾಗಾಗಿ ಈ ವರ್ಷ ರೇಷ್ಮೆ ವಸ್ತ್ರಗಳ ಬದಲು ಕಾಣಿಕೆಯನ್ನು ಹಾಕಿಬಿಡುತ್ತೇನೆ ಮಂತ್ರಾಲಯದ ಹುಂಡಿಯಲ್ಲಿ. ಅದಿರಲಿ,  ನಿನಗಾರು ಹೇಳಿದರು ಆ ವಿಷಯವನ್ನು?" ಎಂದು ಕುತೂಹಲದಿಂದ ಪ್ರಶ್ನಿಸಿದರು. ಆಗ ಸರಸ್ವತಿಯು ತನ್ನ ಕನಸಿನಲ್ಲಿ ಪ್ರಹ್ಲಾದರಾಜರು ಬಂದು ನಿನ್ನ ತಂದೆ ಈ ವರ್ಷ ನನಗೆ ರೇಷ್ಮೆ ವಸ್ತ್ರವನ್ನು ಕೊಟ್ಟಿಲ್ಲವಾದ್ದರಿಂದ ನಾನು ಅಲಂಕಾರವಿಲ್ಲದೆ ಇದ್ದೇನೆ ಎಂದು ಹೇಳಿದ್ದನ್ನು ವಿವರಿಸಿದರು. ಮಗಳ ಮಾತುಗಳನ್ನು ಕೇಳಿದ ನರಸಿಂಗರಾಯರು ಕಂಭದಂತೆ ನಿಂತುಬಿಟ್ಟರು. ರಾಘವೇಂದ್ರ ಪ್ರಭುಗಳು ಈ ಅಲ್ಪನ ಕಿಂಚಿತ್ ಸೇವೆಯನ್ನು ಮಹತ್ತಾಗಿ ಸ್ವೀಕರಿಸುತ್ತಿದ್ದಾರಲ್ಲಾ ಎಂದು ಅವರ ಕಾರುಣ್ಯವನ್ನು ನೆನೆಯುತ್ತಾ ಭಕ್ತಿಯಿಂದ ಕಣ್ಣೀರು ಹರಿಸತೊಡಗಿದರು. ಸ್ವಲ್ಪ ಕಾಲದ ನಂತರ ಎಚ್ಚರಗೊಂಡು, ದೇವರ ಮನೆಗೆ ಹೋಗಿ ಶ್ರೀ ರಾಘವೇಂದ್ರಸ್ವಾಮಿಗಳ ಚಿತ್ರದ ಮುಂದೆ ತುಪ್ಪದ ದೀಪಗಳನ್ನು ಹಚ್ಚಿಟ್ಟು " ಹೇ ಭಕ್ತ ಜನ ಪರನೇ, ಗುರುರಾಜಾ, ನಾನು ನಿನಗೆ ರೇಷ್ಮೆವಸ್ತ್ರವನ್ನು ನೀಡುವುದಿಲ್ಲವೆಂದು ಮಾಡಿದ ತಪ್ಪು ಸಂಕಲ್ಪವನ್ನು ತಿದ್ದಿ ಎಚ್ಚರಿಸಿದ್ದೀಯಾ ಪ್ರಭೋ. ಈ ಅಲ್ಪನಿಂದ ನೀಡಲ್ಪಡುತ್ತಿರುವ ಕಿಂಚಿತ್ ಸೇವೆಯನ್ನೂ ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತಿರುವ ನಿಮ್ಮ ಹೃದಯ ವೈಶಾಲ್ಯಕ್ಕೆ ನೀವೇ ಸಾಟಿ ಗುರುವೇ. ಈ ಕೂಡಲೇ ಚಾಮರಾಜನಗರಕ್ಕೆ ಹೋಗಿ ರೇಷ್ಮೆ ವಸ್ತ್ರಗಳನ್ನು ನೇಯಿಸಿಯೇ ತರುತ್ತೇನೆ. ನಿನ್ನ ಪ್ರೇರೇಪಣೆಯಾಗಿದೆಯೆಂದ ಮೇಲೆ ಅದು ಸುಲಭ ಸಾಧ್ಯ" ಎಂದು ದೀರ್ಘದಂಡ ನಮಸ್ಕಾರವನ್ನು ಮಾಡಿದರು.

ತಕ್ಷಣವೇ ಚಾಮರಾಜನಗರಕ್ಕೆ ಹೊರಟರು ನರಸಿಂಗರಾಯರು. ರಾಘವೇಂದ್ರ ಪ್ರಭುಗಳ ಇಚ್ಛೆಗೆ ಬಂದರೆ ಕೇಳಬೇಕೆ. ಯಾವುದೇ ತೊಂದರೆಯಿಲ್ಲದೆ ಆ ಮಳೆಯಲ್ಲೂ ಚಾಮರಾಜನಗರಕ್ಕೆ ಬಂದು ತಲುಪಿದರು. ತಮಗೆ ಪ್ರತಿ ವರ್ಷವೂ ರೇಷ್ಮೆ ವಸ್ತ್ರಗಳನ್ನು ನೇಯ್ದು ಕೊಡುವ ನೇಕಾರನಲ್ಲಿಗೆ ಬಂದರು. ಇವರನ್ನು ಕಂಡೊಡನೆ ಅತನು "ಸ್ವಾಮೀ ನಿನ್ನೆಯಷ್ಟೇ ಯಾರೋ ಉತ್ತಮವಾದ ರೇಷ್ಮೆ ನೂಲನ್ನು ತಂದು ಕೊಟ್ಟಿದ್ದಾರೆ. ತಮ್ಮನ್ನೇ ನೆನೆಸುತ್ತಿದ್ದೆ." ಎಂದನು. ಅದನ್ನು ಕೇಳಿದ ನರಸಿಂಗರಾಯರು "ಎಲ್ಲವೂ ಮಂತ್ರಾಲಯ ಪ್ರಭುಗಳ ಮಹಿಮೆ. ಅವರ ಈ ಆಟದಲ್ಲಿ ನಾನು ನಿಮಿತ್ತ ಮಾತ್ರನಷ್ಟೇ" ಎಂದು ಮನದಲ್ಲೇ ಮಂತ್ರಾಲಯ ಪ್ರಭುಗಳಿಗೆ ನಮಿಸಿದರು. ನಾಲ್ಕಾರು ದಿನಗಳ ಕಾಲ ಚಾಮರಾಜನಗರದಲ್ಲೇ ವಾಸ್ತವ್ಯವನ್ನು ಮಾಡಿ ರೇಷ್ಮೆ ವಸ್ತ್ರಗಳನ್ನು ನೇಯಿಸಿದರು.

ಆರಾಧನೆಯ ಕಾಲಕ್ಕೆ ಮಂತ್ರಾಲಯಕ್ಕೆ ಆಗಮಿಸಿದ ನರಸಿಂಗರಾಯರು, ಆ ರೇಷ್ಮೆ ವಸ್ತ್ರಗಳನ್ನು ಶ್ರೀ ಸುಯಮೀಂದ್ರ ತೀರ್ಥ ಶ್ರೀಪಾದಂಗಳವರಿಗೆ  ಒಪ್ಪಿಸಿ, ತಾವು ಈ ಬಾರಿ ವಸ್ತ್ರಗಳನ್ನು ತರುವುದಿಲ್ಲವೆಂದುಕೊಂಡದ್ದು, ಪ್ರಹ್ಲಾದರಾಜರು ಮಗಳ ಕನಸಿನಲ್ಲಿ ಬಂದು ವಸ್ತ್ರವನ್ನು ನೀಡಬೇಕೆಂದು ಎಚ್ಚರಿಸಿದ್ದು, ಹೀಗೆ ಎಲ್ಲ ವೃತ್ತಾಂತವನ್ನೂ ಮಹಾಸ್ವಾಮಿಗಳಲ್ಲಿ ನಿವೇದಿಸಿಕೊಂಡರು. ಎಲ್ಲವನ್ನೂ ಕೇಳಿದ ಶ್ರೀಪಾದಂಗಳವರು ನಸುನಕ್ಕು ನರಸಿಂಗರಾಯರಿಗೆ ಮಂತ್ರಾಕ್ಷತೆಯನ್ನಿತ್ತು "ಆ ಗುರುರಾಯರು ನಿನ್ನಿಂದ ಕೇಳಿ ಸೇವೆಯನ್ನು ಮಾಡಿಸಿಕೊಳ್ಳುವಷ್ಟು ಅವರಿಗೆ ಪ್ರೀತಿಪಾತ್ರನಾಗಿದ್ದೀಯ. ನೀನೆ ಭಾಗ್ಯವಂತ. ಆ ಗುರುರಾಜರು ನಿನ್ನ ಮೇಲೆ ಇನ್ನಷ್ಟು ಪ್ರೀತಿಯ ಹೊಳೆ ಹರಿಸಲಿ" ಎಂದು ಆಶೀರ್ವದಿಸಿದರು. 
ರಾಯರ ಬೃಂದಾವನದ ಬಳಿಬಂದು ಸಾಷ್ಟಾಂಗವೆರಿಗಿ ಭಕ್ತಿಯಿಂದ ಸ್ತುತಿಸಿದರು ನರಸಿಂಗರಾಯರು

ಸೇವಕನ ಸೇವೆಯನು ಸೇವಿಸಿ
ಸೇವ್ಯ ಸೇವಕ ಭಾವವೀಯುತ । 
ಠಾವು ಗಾಣಿಸಿ ಪೊರೆಯೊ ಧರೆಯೊಳು 
ಪಾವನಾತ್ಮಕ ಕಾಯ್ವ ಕರುಣೀ ।।

No comments:

Post a Comment