ರಚನೆ: ಕನಕದಾಸರು
ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ ||ಪ||
ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ ||೧||
ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ ||೨||
ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿ ಕೇಶವನಲ್ಲದ ದೈವವೇತಕೆ ||೩||
Author : Kanaka Dasaru
Satyavantara sangaviralu teerthavEtake
nitya jnaaniyaada mele chinte yaatake
taanu uNNada pararigikkada dhanaviddetake
maana heenanaagi baaLva manujanEtake
jNaanavillade nooru kaala badukalEtake
maaniniya toredavane bhogaVetake ||1||
maatu kELade malatu naDeva makkaLEtake
preeti illade yedayanikkida annavEtake
neetiayaritu naDeyadiruva bantanEtake
sOtu heNNige hedari naDeva purushanEtake ||2||
sanjneyaritu naDeyadiruva sati iddetake
munna kottu paDeyadannu bayasalEtake
mannaNeya naDesadiruva doreyu yEtake
chenna aadi keshavanallada daivavEtake ||3||
Version - 2
ಕೀರ್ತನಕಾರರು : ಕನಕದಾಸರು
ರಾಗ : ಪೂರ್ವಿ
ತಾಳ : ರೂಪಕ
ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಅನ್ನದಾನವಿರಲು ಭಯವು ಏತಕೆ ।।ಪ॥
ಗುರುಹಿರಿಯರ ಅರಿಯದವನ ಅರಿವದೇತಕೆ
ಪರಹಿತಾರ್ಥಕಿಲ್ಲದವನ ಶರೀರವೇತಕೆ
ಹರಿಯ ಪೂಜೆ ಮಾಡದವನ ಜನುಮವೇತಕೆ
ಸೇರಿದವರ ಹೊರೆಯದಂಥ ದೊರೆಯು ಏತಕೆ ।।೧।।
ಮಾತು ಕೇಳದೆ ಮಲೆತು ನಡೆವ ಮಕ್ಕಳೇತಕೆ
ಭೀತನಾಗಿ ಓಡಿಬರುವ ಬಂಟಾನೇತಕೆ
ಪ್ರೀತಿ ಇಲ್ಲದೆ ಎಡೆಯನಲಿಕ್ಕಿದ ಊಟವೇತಕೆ
ಸೋತು ಹೆಣ್ಣಿಗೆ ಹೆದರಿ ನಡೆಯದ ಸುಗುಣನೇತಕೆ ।।೨।।
ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ನುಣ ಹೆಚ್ಚು ನೋಡುವಲ್ಲಿ ಇರುವುದೇತಕೆ
ತನ್ನ ಬಳಗವೆರಸಿ ಉಣ್ಣದ ಭಾಗ್ಯವೇತಕೆ ।।೩।।
ತಾನು ತನ್ನನರಿಯದಂಥ ಪ್ರೌಢನೇತಕೆ
ಸ್ನಾನ ಸಂಧ್ಯಾನವಿಲ್ಲದ ಶೀಲವೇತಕೆ
ಜ್ಞಾನವಿಲ್ಲದೆ ನುರುಕಾಲ ಬದುಕಲೇತಕೆ
ಧ್ಯಾನದೊಳಗೆ ಕೃಷ್ಣನಿಲ್ಲದ ತನುವಿದ್ದೇತಕೆ ।।೪।।
ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಭಿನ್ನವರಿತು ನಡೆಯದಂಥ ಸ್ನೇಹವೇತಕೆ
ಮುನ್ನ ಕೊಟ್ಟು ಪಡೆಯಲಿಲ್ಲ ಬಯಸಲೇತಕೆ
ಚೆನ್ನ ಆದಿಕೇಶವನಿರಲು ಬೇರೆ ದೈವವೇತಕೆ ।।೫।।
Listen song by Shri Vidyabhushana
No comments:
Post a Comment